ಡಾ.ವಿಷ್ಣುವರ್ಧನ್ ಅವರು ಸಂಕ್ರಮಣ ಕಾಲಘಟ್ಟದಲ್ಲಿ ಬಂದ ಕಲಾವಿದರು. ಅದು ಕನ್ನಡಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೂ ಸಂಕ್ರಮಣ ಕಾಲಘಟ್ಟವೇ. 1970 ರ ದಶಕದವರೆಗೆ ನಿರ್ಮಾಪಕರಿಗೆ ಮಹತ್ವವಿತ್ತು. ಸ್ಟುಡಿಯೋ ಸಿಸ್ಟಂ ಕೂಡ ಬಹುತೇಕ ಚಿತ್ರರಂಗದಲ್ಲಿತ್ತು. ಕಲಾವಿದರಿಗೆ ತಿಂಗಳ ಸಂಬಳ ನೀಡುವ ಸ್ಟುಡಿಯೋಗಳು ದಕ್ಷಿಣ ಭಾರತದಲ್ಲಿದ್ದವು. ಬೇರೆ ಏಕೆ ಕನ್ನಡದಲ್ಲಿಯೇ ಬಿ.ಆರ್.ಪಂತುಲು ಅಂತಹ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಆದರೆ 1970ರ ದಶಕದ ನಂತರ ಸ್ಟಾರ್ ಪದ್ದತಿ ಬಂದಿತು. ನಾಯಕನಟರ ವಿಜೃಂಭಣೆ ಶುರುವಾಯಿತು. ಅವರಿಗೆ ತಕ್ಕಂತಹ ಕಥೆಗಳೂ ರೂಪುಗೊಂಡವು. ಜೊತೆ ಜೊತೆಗೆ ಮಧ್ಯಮ ವರ್ಗ ರೂಪುಗೊಂಡಿದ್ದು ಸಹ ಅದೇ ಹೊತ್ತಿನಲ್ಲಿ. ಅಂತಹ ಮಧ್ಯಮ ವರ್ಗವನ್ನು ಪ್ರತಿನಿಧಿಸುವ ರಾಮಾಚಾರಿಯಾಗಿ ಡಾ.ವಿಷ್ಣುವರ್ಧನ್ ಅವರ ಆಗಮನ ಒಂದು ಹೊಸ ಅಲೆಯನ್ನೇ ಎಬ್ಬಿಸಿಬಿಟ್ಟಿತು. ಅಲ್ಲಿವರೆಗೆ ಹೀರೋ ಅಂದರೆ ಶ್ರೀರಾಮಚಂದ್ರನಂತಹವನು, ನೊಂದವರಿಗೆ ಮಿಡಿಯುವವನು, ಆಪತ್ಕಾಲದಲ್ಲಿ ನೆರವಾಗುವವನು, ಸುಳ್ಳಾಡದವನು, ತಪ್ಪು ಕೆಲಸ ಮಾಡದವನು ಎಂಬ ಮಾನದಂಡಗಳಿದ್ದವು. ಆದರೆ ನಾಗರಹಾವು ಚಿತ್ರದ ರಾಮಾಚಾರಿ ಆ ಎಲ್ಲಾ ಪೂರ್ವಾಗ್ರಹಗಳನ್ನು ಕಿತ್ತೊಗೆದು "ಪಕ್ಕದ ಮನೆ" ಹುಡುಗನಂತೆ ಕನ್ನಡಿಗರಿಗೆ ಕಂಡುಬಿಟ್ಟರು. ಈ ಹೀರೋ, ನಮಗಿಂತ ಬೇರೆಯಲ್ಲ ಎಂಬ ಭಾವನೆಯೇ ವಿಷ್ಣುವರ್ಧನ್ ಅವರನ್ನು ಕನ್ನಡಿಗರು ಮನೆಮನಗಳಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಕಾರಣವಾಯಿತು. ಮತ್ತು ಆ ಮಟ್ಟದ ಜನಪ್ರಿಯತೆಯೇ ಅವರ ಮೂರೂವರೆ ದಶಕಗಳ ಮುಳ್ಳಿನ ಹಾದಿಗೂ ಮುನ್ನಡಿಯಾಯಿತು.
ಡಾ.ವಿಷ್ಣುವರ್ಧನ್ ಅವರು ಭಿನ್ನವಾಗುವುದು ಅವರ ಚಿತ್ರಗಳ ಸಾಂಸ್ಕೃತಿಕ ನೆಲೆಗಳಿಂದ. ಅವರ ಚಿತ್ರಗಳಲ್ಲಿ ನಾಯಕಿಯರಿಗೆ, ಪೋಷಕ ಪಾತ್ರಗಳಿಗೆ ಅವರಷ್ಟೇ ಪ್ರಾಮುಖ್ಯತೆ ಇರುತ್ತಿತ್ತು. ಮಧ್ಯಮ ವರ್ಗದವರ ಬದುಕು, ಬವಣೆ, ಭರವಸೆಗಳ ಧ್ವನಿಯಾಗಿರುತಿತ್ತು. ನಾಗರಹಾವು ಚಿತ್ರದ ರಾಮಾಚಾರಿಯಾಗಲಿ, ಭೂತಯ್ಯನ ಮಗ ಅಯ್ಯು ಚಿತ್ರದ ಗುಳ್ಳನಾಗಲಿ, ಮುತ್ತಿನ ಹಾರದ ಧೀರಯೋದ ಅಪ್ಪಚ್ಚನಾಗಲಿ, ವೀರಪ್ಪನಾಯ್ಕದ ದೇಶಪ್ರೇಮಿಯಾಗಲಿ, ಬಂಧನ ಚಿತ್ರದ ಅಮರ ಪ್ರೇಮಿಯಾಗಲಿ, ದಿಗ್ಗಜರು ಚಿತ್ರದ ಸ್ನೇಹಿತನಾಗಲಿ, ಸಾಹಸಸಿಂಹದ ಆಂಗ್ರಿ ಯಂಗ್ ಮ್ಯಾನ್ ಆಗಲಿ... ಎಲ್ಲಾ ಪಾತ್ರಗಳಲ್ಲೂ ಕನ್ನಡಿಗರ ಮನದಾಳಕ್ಕೆ ಇಳಿದವರು ಡಾ.ವಿಷ್ಣುವರ್ಧನ್ ಅವರು. ಅವರು ತಮ್ಮ ಪಾತ್ರಗಳ ಮೂಲಕ ರಂಜಿಸಿದರು, ಸ್ಫೂರ್ತಿ ತುಂಬಿದರು, ಕಣ್ಣೀರು ಹಾಕಿಸಿದರು ಮತ್ತು ಗಾಢವಾಗಿ ಕಾಡಿದರು.
ಕಡು ಕಷ್ಟದ ಹಾದಿ ಅವರದು. ಆ ಹಾದಿಯಲ್ಲಿಯೇ ಸಾಗಿ ಅವರು ಹಿಮಾಲಯದಷ್ಟು ಸಾಧನೆ ಮಾಡಿದರು. ಅಷ್ಟು ಸಾಧನೆ ಮಾಡಿದರೂ ಸಂತನಂತೆಯೇ ಉಳಿದು ಹೋದರು. ಅವರನ್ನು ನೆನಪಿಸಿಕೊಂಡಾಗ ಕಣ್ಮುಂದೆ ಬರುವುದು ಅವರ ನಿಷ್ಕಳಂಕ ನಗು, ಬೇಷರತ್ ಪ್ರೀತಿ, ಗಾಢ ಮೌನ. ವಿಷ್ಣುವರ್ಧನ್ ಅವರು ಎಲ್ಲಾ ಅರ್ಥಗಳಲ್ಲೂ ಶಿಕಾರಿಯಾದವರು. ಅವರನ್ನು ಅವರ ಖ್ಯಾತಿಯೇ ಬೇಟೆಯಾಡಿತು ಎಂಬುದು ಸರ್ವವಿಧಿತ. ಹೊರಗಿನ ಶತ್ರುಗಳಷ್ಟೇ ಒಳಗಿನ ಶತ್ರುಗಳೂ ಅವರ ಬೆನ್ನುಬಿದ್ದಿದ್ದರು. ಅವರಿಗೆ ಗಾಡ್ ಫಾದರ್ ಅಂತ ಯಾರೂ ಇರಲಿಲ್ಲ. ಒಂದು ರೀತಿಯ ಸ್ವಘೋಷಿತ ಏಕಾಂತದಲ್ಲಿ ಅವರು ಧ್ಯಾನಸ್ಥರಾಗಿದ್ದರು. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ರಾಷ್ಟ್ರದಾದ್ಯಂತ ಕನ್ನಡ ಕೀರ್ತಿ ಪತಾಕೆಯನ್ನು ಹಾರಿಸಿದರು. ನೆಲ, ಜಲ, ನಾಡು, ನುಡಿ ಸಂಬಂಧಿತ ವಿಷಯಗಳಲ್ಲಿ ತಮ್ಮ ಜವಬ್ದಾರಿಯನ್ನು ಮುಂಚೂಣಿಯಲ್ಲಿ ನಿಂತು ನಿರ್ವಹಿಸಿದರು. ಸೋಲುಗಳಿಗೆ ಅಂಜಲಿಲ್ಲ, ಯಶಸ್ಸಿಗೆ ಹಿಗ್ಗಲಿಲ್ಲ! ಸಿಗದೇ ಹೋದವುಗಳಿಗೆ ಬೇಜಾರಿರಲಿಲ್ಲ ಎಕೆಂದರೆ ಕನ್ನಡಿಗರಿಂದ ಸಿಕ್ಕಿದ ಪ್ರೀತಿ ಅಭಿಮಾನ ಸಣ್ಣವೇನೂ ಆಗಿರಲಿಲ್ಲ. ಆ ಲೆಕ್ಕದಲ್ಲಿ ಅವರು ಕೋಟಿಗೊಬ್ಬರೇ ಆಗಿದ್ದರು. ಸಾಧನೆ, ಸಂಯಮ, ಆದರ್ಶಗಳಲ್ಲಿ ಕನ್ನಡ ಚಿತ್ರರಂಗದ ಯಜಮಾನರೇ ಆಗಿದ್ದರು.
ಡಾ.ವಿಷ್ಣುವರ್ಧನ್ ಕನ್ನಡದ ಆದರ್ಶನಟ. ಬಲಗೈನಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ನೋಡಿಕೊಂಡರು. ತನಗೆ ಉತ್ತರಾಧಿಕಾರಿ ಬೇಕು ಎಂದು ಗಂಡು ಮಗನನ್ನು ದತ್ತುಪಡೆಯುವ ಬದಲು ಹೆಣ್ಣುಮಕ್ಕಳನ್ನೇ ದತ್ತುಪಡೆದರು. ನುಡಿದಂತೆ ನಡೆದರು, ನಡೆದಂತೆ ನಡೆಸಿದರು. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವವಾದರು, ಸಾವಿರಾರು ಬದುಕುಗಳಿಗೆ ಬೆಳಕಾದರು. ಆದ್ದರಿಂದಲೇ ಅವರು ಇಲ್ಲವಾಗಿ 13 ವರ್ಷಗಳು ಕಳೆದರೂ ಅವರ ಹೆಸರು ಜೀವಂತವಿರುವ ಕಲಾವಿದರಿಗೆ ಸರಿಸಮಾನಾಗಿ ರಾಜ್ಯದಾದ್ಯಂತ ಚಲಾವಣೆಯಲ್ಲಿದೆ. ಇಂದಿಗೂ ಸಾವಿರಾರು ಅಭಿಮಾನಿಗಳು ಡಾ.ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಡಾ.ವಿಷ್ಣುವರ್ಧನ್ ಅವರ ಬದುಕು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆಯನ್ನು ಹೊತ್ತುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಆ ಕುರಿತಾದ ಮಾಹಿತಿಯನ್ನು ಈ ವೆಬ್ಸೈಟ್ನಲ್ಲಿ ನೀವು ಕಾಣಬಹುದು.
ಓದುವ, ಅರಿಯು, ಬೆರೆಯುವ, ಎಲ್ಲರೊಳಗೊಂದಾಗುವ ಸುಖ ನಿಮ್ಮದಾಗಲಿ
ಡಾ.ವಿಷ್ಣು ಪುಣ್ಯಭೂಮಿಗಾಗಿ 14 ದಿನಗಳ ಹೋರಾಟವನ್ನು ನಡೆಸಿ, ಸರ್ಕಾರವನ್ನು ನಾವಿದ್ದ ಜಾಗಕ್ಕೆ ಕರೆಸಿಕೊಂಡಂತಹ ಖ್ಯಾತಿ ಡಾ.ವಿಷ್ಣು ಸೇನಾ ಸಮಿತಿಯದು. ಆನಂತರದಲ್ಲಿ ಡಾ.ಭಾರತಿ ವಿಷ್ಣುವರ್ಧನ್ ಅವರು ನೀವು ಎಷ್ಟೇ ಹೋರಾಟ ಮಾಡಿದರೂ ನಾನು ಅಭಿಮಾನ್ ಸ್ಟುಡಿಯೋಗೆ ಕಾಲಿಡುವುದಿಲ್ಲವೆಂದು ಹೇಳಿದಾಗ ನಮ್ಮ ಪ್ರಯತ್ನಗಳು ವ್ಯರ್ಥವಾದವು. ಆದರೂ 2016 ರಿಂದ ಇದುವರೆಗೆ ಕಾನೂನು ಹೋರಾಟವನ್ನು ಡಾ.ವಿಷ್ಣು ಸೇನಾ ಸಮಿತಿಯು ಮುಂದುವರಿಸಿಕೊಂಡು ಬರುತ್ತಿದೆ. ಅದಕ್ಕಾಗಿ ಈಗಾಗಲೇ ಲಕ್ಷಾಂತರ ರೂಗಳನ್ನು ವ್ಯಯಿಸಿದ್ದೇವೆ.
ಪ್ರತಿ ಅಭಿಮಾನಿಗೆ, ಅವರ ಮನೆಯವರಿಗೆ ಪ್ರತಿನಿತ್ಯವೂ ಯಜಮಾನ್ರು ಕಾಣುವಂತಾಗಬೇಕೆಂಬ ಹಂಬಲದಿಂದ 2012 ರಲ್ಲಿ ಶುರುವಾಗಿದ್ದೇ ಕೋಟಿಗೊಬ್ಬ ಕ್ಯಾಲೆಂಡರ್. ಕೇವಲ 1000 ಮುದ್ರಣದ ಮೂಲಕ ಶುರುವಾದ ಕೋಟಿಗೊಬ್ಬ ಕ್ಯಾಲೆಂಡರ್ ಪ್ರಸ್ತುತ 25000 ಕ್ಕೂ ಹೆಚ್ಚು ಮುದ್ರಣವನ್ನು ಕಾಣುತ್ತಿದೆ. ಇದರ ಖರ್ಚುಗಳು ನೂರು ರೂಪಾಯಿಗಿಂತ ಹೆಚ್ಚಾಗುತ್ತಿದ್ದರೂ ಎಲ್ಲಾ ಅಭಿಮಾನಿಗಳಿಗೆ ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕೆಂಬ ಸಂಕಲ್ಪದಿಂದ ಆರಂಭದಿಂದ ಇಂದಿನವರೆಗೆ ರೂ.50/- ಗಳಿಗೆ ಈ ಕ್ಯಾಲೆಂಡರ್ ದೊರಕುತ್ತಿದೆ.
ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ, ಕನ್ನಡಿಗರೆಲ್ಲರು ಕನ್ನಡದಲ್ಲಿಯೇ ಮಾತನಾಡಿದರೆ ಸಾಕು ಎಂಬ ಡಾ.ವಿಷ್ಣುವರ್ಧನ್ ಅವರ ಮಾತಿನಂತೆ ಸುಮಾರು ಏಳು ಶಾಲೆಗಳ ಜೀರ್ಣೋದ್ಧಾರ ಕೆಲಸದಲ್ಲಿ ಡಾ.ವಿಷ್ಣು ಸೇನಾ ಸಮಿತಿಯು ತನ್ನನ್ನು ತೊಡಗಿಸಿಕೊಂಡಿತ್ತು. ಈ ಅಭಿಯಾನದ ಸಂಪೂರ್ಣ ಹಣಕಾಸಿನ ಹೊಣೆಯನ್ನು ವೀರಕಪುತ್ರ ಶ್ರೀನಿವಾಸ ಅವರು ವಹಿಸಿಕೊಂಡಿದ್ದರು.
2017 ರಲ್ಲಿ ಡಾ.ವಿಷ್ಣು ರಾಷ್ಟ್ರೀಯ ಉತ್ಸವವನ್ನು ರಾಷ್ಟ್ರ ರಾಜ್ಯಧಾನಿ ನವದೆಹಲಿಯಲ್ಲಿ ಆಯೋಜಿಸಿತ್ತು. ಪ್ರಸಿದ್ಧ ದೆಹಲಿಯ ಇಂಡಿಯಾ ಗೇಟ್ ಮುಂದೆ ನೂರಾರು ಸೇನಾನಿಗಳು ಡಾ.ವಿಷ್ಣು ಮತ್ತು ಕನ್ನಡಾಂಬೆಯ ಭಾವಚಿತ್ರವನ್ನು ಎತ್ತಿ ಹಿಡಿದರು. ಇಡೀ ದೇಶದಲ್ಲಿ ಕಲಾವಿದರ ಹೆಸರಲ್ಲಿ ಇಂತಹದ್ದೊಂದು ಉತ್ಸವ ಜರುಗಿದ ಉದಾಹರಣೆ ಇಲ್ಲ. ಇದಕ್ಕಾಗಿ ಎಲ್ಲಾ ವಿಷ್ಣು ಅಭಿಮಾನಿಗಳು ಹೆಮ್ಮೆ ಪಡಬೇಕು. ಅದೇ ರೀತಿ 2018ರಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಆಯೋಜಿಸಿ ಇತಿಹಾಸ ಬರೆಯಲಾಗಿದೆ.
ಡಾ.ಭಾರತಿ ವಿಷ್ಣುವರ್ಧನ್ ಅವರು "ಅಭಿಮಾನ್ ಸ್ಟುಡಿಯೋ"ಗೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ ಮೇಲೆ ಅಲ್ಲಿನ ಕಾರ್ಯಕ್ರಮಗಳ ಜವಬ್ದಾರಿವಹಿಸಿಕೊಂಡಿದ್ದು ಡಾ.ವಿಷ್ಣು ಸೇನಾ ಸಮಿತಿ. ಆನಂತರದಲ್ಲಿ ಇತರೆ ಸಂಘಸಂಸ್ಥೆಗಳ ಪ್ರಮುಖರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಡಾ.ವಿಷ್ಣುವರ್ಧನ್ ಅವರ 70 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತ ಸರ್ಕಾರದ ಅಂಚೆ ಇಲಾಖೆಯಿಂದ "ವಿಶೇಷ ಅಂಚೆ ಲಕೋಟೆ" ಯನ್ನು ಬಿಡುಗಡೆ ಮಾಡಲಾಗಿದೆ. ಇದು ವೀರಕಪುತ್ರ ಶ್ರೀನಿವಾಸ ಅವರ ಸತತ ಪ್ರಯತ್ನದ ಫಲವಾಗಿ ಕಾರ್ಯರೂಪಕ್ಕೆ ಬಂದಿತು.
ಡಾ.ವಿಷ್ಣುವರ್ಧನ್ ಅವರ 70ನೇ ಜಯಂತಿಯಂದು ರಾಜ್ಯದಾದ್ಯಂತ ಸುಮಾರು 70000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಕೇವಲ ನೆಡುವುದು ಮಾತ್ರವಲ್ಲ, ಅವುಗಳನ್ನು ಇಂದಿಗೂ ಪೋಷಿಸಿಕೊಂಡು ಬರುತ್ತಿರುವುದು ವಿಷ್ಣು ಸೇನಾನಿಗಳ ಹೆಗ್ಗಳಿಕೆ.
ಡಾ.ವಿಷ್ಣು ಸೇನಾನಿಗಳು ಕೇವಲ ಸಾಮಾಜಿಕ ಕೆಲಸಗಳನ್ನು ಮಾತ್ರ ಮಾಡುತ್ತಿಲ್ಲ. ಅವರು ಸಾಹಿತ್ಯ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡ ಮಾಣಿಕ್ಯ ಎಂಬ ಮಾಸಪತ್ರಿಕೆಯನ್ನು ಕಳೆದ ಎಂಟು ವರ್ಷಗಳಿಂದ ಹೊರತರುತ್ತಿದ್ದಾರೆ. ಈ ಪತ್ರಿಕೆಗೆ ನಾಡಿನ ಹೆಸರಾಂತ ಲೇಖಕರೆಲ್ಲರೂ ಬರೆಯುತ್ತಿದ್ದಾರೆ. ಸಾವಿರಾರು ಓದುಗರ ಬೆಂಬಲ ಈ ಪತ್ರಿಕೆಗಿದೆ.
ನಾಡಿನ ಖ್ಯಾತ ಸಾಹಿತಿಗಳಾದ ಜೋಗಿ, ಸದಾಶಿವ ಶೆಣೈ ಹಾಗೂ ಎನ್.ಎಸ್.ಶ್ರೀಧರ ಮೂರ್ತಿ, ಡಾ.ಶರಣು ಹುಲ್ಲೂರು ಅವರ ಮೂಲಕ ಡಾ.ವಿಷ್ಣುವರ್ಧನ್ ಅವರ ನಾಲ್ಕು ಕೃತಿಗಳನ್ನು ಹೊರತರುವ ಸಂಪೂರ್ಣ ಜವಾಬ್ದಾರಿಯನ್ನು ಡಾ.ವಿಷ್ಣು ಸೇನಾ ಸಮಿತಿ ವಹಿಸಿಕೊಂಡಿದೆ.
ಶಿಕ್ಷೆ ಅವಧಿ ಮುಗಿದ ಖೈದಿಗಳ ಬಿಡುಗಡೆಗೆ ಕ್ರಮ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನಾಚರಣೆಯ ಅಂಗವಾಗಿ ಶಿಕ್ಷೆಯ ಅವಧಿ ಮುಗಿದಿದ್ದರೂ ಇನ್ನೂ ಜೈಲಿನಲ್ಲಿಯೇ ಇದ್ದಂತಹ ರಾಜ್ಯದ ನಾನಾ ಜೈಲುಗಳಲ್ಲಿನ ಹತ್ತು ಖೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.
ರಾಜ್ಯಾದ್ಯಂತ ಸುಮಾರು 51 ಕ್ಕೂ ಹೆಚ್ಚು ಡಾ.ವಿಷ್ಣು ಪ್ರತಿಮೆಗಳನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರು ಕೊಡುಗೆಯಾಗಿ ನೀಡಿದ್ದಾರೆ.
ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳಾದ ಹಿನ್ನಲೆಯಲ್ಲಿ 50 ಸೇನಾನಿಗಳು ಒಂದುಗೂಡಿ 50 ಕಟೌಟ್ಗಳನ್ನು ನಿರ್ಮಿಸಿದರು. ಇದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ನೋಂದಣಿಯಾಗಿದೆ.
ಇದೇ ಮೊದಲನೇ ಬಾರಿಗೆ ಕಲಾವಿದರೊಬ್ಬರ ಹೆಸರಿನಲ್ಲಿ ನೂರೈವತ್ತು ಕಿಮಿಗಳ ಪಾದಯಾತ್ರೆ ನಡೆಯಿತು. ಆದರ್ಶಯಾತ್ರೆ ಎಂದು ಹೆಸರನ್ನು ಹೊಂದಿದ್ದಂತಹ ಈ ಯಾತ್ರೆಯು ಆರೋಗ್ಯಕ್ಕಾಗಿ ಎಂಬ ಅಡಿಬರಹವನ್ನು ಹೊಂದಿದೆ. ದೈಹಿಕ ಮತ್ತು ಸಮಾಜದ ಆರೋಗ್ಯಕ್ಕಾಗಿ ಈ ಆದರ್ಶಯಾತ್ರೆ ಆರಂಭವಾಗಿದೆ. ಮೈಸೂರಿನಿಂದ ಶುರುವಾಗಿ ಬೆಂಗಳೂರಿನ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ ತನಕ ಈ ಪಾದಯಾತ್ರೆಯು ನಡೆಯಿತು. ಈ ಪಾದಯಾತ್ರೆಯಲ್ಲಿ ರಾಜ್ಯದ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು. ಆಸ್ಟ್ರೇಲಿಯಾದ ಬಲರಾಮ್ ಅವರು ಈ ಆದರ್ಶ ಯಾತ್ರೆಯ ನೇತೃತ್ವವನ್ನು ವಹಿಸಿದ್ದರು.
ದಿನ ಇಡೀ ರಾಜ್ಯಾದ್ಯಂತ ಡಾ. ನಾವು ವಿಷ್ಣುವರ್ಧನ್ ಅವರ ಜನ್ಮದಿನವಾದ ಸೆಪ್ಟೆಂಬರ್ 18 ಅನ್ನು "ರಾಷ್ಟ್ರೀಯ ಆದರ್ಶ ದಿನ" ಎಂದು ಆಚರಿಸುತ್ತಿದ್ದೇವೆ. ವ್ಯಾಲೆಂಟೈನ್ಸ್ ಡೇ, ಫಾದರ್ಸ್ ಡೇ, ಮದರ್ಸ್ ಡೇ ಇದನ್ನೆಲ್ಲ ಯಾವಾಗ, ಯಾರು ಜಾರಿಗೆ ತಂದರೋ ಗೊತ್ತಿಲ್ಲ. ಆದರೆ ನಾವೆಲ್ಲರೂ ಇವುಗಳನ್ನು ಆಚರಿಸುತ್ತಿದ್ದೇವೆ. ಅದೇ ರೀತಿ ನಮ್ಮ ತಲೆಮಾರಿನ ಎಲ್ಲ ಅಭಿಮಾನಿಗಳು ಅಗಲಿದರೂ ಈ ಆದರ್ಶ ದಿನದ ನೆನಪಿನಲ್ಲಿ ವಿಷ್ಣು ಜಯಂತಿಯನ್ನು ಇಡೀ ರಾಷ್ಟ್ರವೇ ಆಚರಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಡಾ. ಹಾಗಾಗಿ ಇಂತಹ ಮಹತ್ವಾಕಾಂಕ್ಷೆಯ ಆದರ್ಶ ದಿನವನ್ನು ಜಾರಿಗೆ ತಂದಿದ್ದೇವೆ.
ವಾಹನ ಜಾಥ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಪ್ರಯುಕ್ತ ಬೆಂಗಳೂರಿನಿಂದ ಮೈಸೂರಿನ ತನಕ ಸುಮಾರು ಡಾ.ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಒಂದು ಸಾವಿರ ವಾಹನಗಳಲ್ಲಿ ಬೃಹತ್ ಜಾಥಾ ಹೊರಡಲಾಯಿತು. ಇದು ಯಾವುದೇ ನಟನೊಬ್ಬನ ಹೆಸರಿನಲ್ಲಿ ಇದುವರೆಗೂ ಆಗದಂತಹ ಜಾಥಾ ಆಗಿ ದಾಖಲಾಗಿದೆ.
ಪ್ರಸ್ತುತ ಅತ್ಯಂತ ಶಿಸ್ತು ಮತ್ತು ಅತಿದೊಡ್ಡ ನೆಟ್ವರ್ಕ್ ಹೊಂದಿರುವ ಸಂಘವೆಂದರೆ ಅದು ಡಾ.ವಿಷ್ಣು ಸೇನಾ ಸಮಿತಿ. ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ವಿಷ್ಣು ಸೇನಾ ಸಮಿತಿಯು ಅಭಿಮಾನಿಗಳ ಅತ್ಯಂತ ನಂಬುಗೆಯ ಸಂಘವಾಗಿ ಹೆಸರಾಗಿದೆ.
ಡಾ.ವಿಷ್ಣುವರ್ಧನ್ ಅವರಿಗೆ 18.09.2025 ರಂದು 75 ವರ್ಷಗಳು ತುಂಬಲಿವೆ. ಬಹುಶಃ ಅವರ ಶತಮಾನೋತ್ಸವಕ್ಕೆ ನಾವು ಇರುತ್ತೇವೋ ಇಲ್ಲವೋ ತಿಳಿಯದು. ಆದ್ದರಿಂದ ಈ ಅಮೃತ ಮಹೋತ್ಸವವನ್ನು ಅತ್ಯಂತ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸಂಕಲ್ಪ ಹೊಂದಿದ್ದೇವೆ. ಈ ಅಮೃತ ಮಹೋತ್ಸವದಲ್ಲಿ ತೊಡಗಿಸಿಕೊಳ್ಳುವವರು ಕೂಡಲೇ ಇಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
Copyrights © 2023 - VSS Website, All Rights Reserved.
Facebook
Instagram
YouTube
Twitter